ಸಾಲೊಮನ್ ದ್ವೀಪಗಳು ಮೆಲಾನೇಷ್ಯಾದ ಒಂದು ದ್ವೀಪಗುಚ್ಛವಾಗಿರುವ ರಾಷ್ಟ್ರ. ಈ ದೇಶವು ಶಾಂತ ಮಹಾಸಾಗರದಲ್ಲಿ ಪಾಪುವ ನ್ಯೂಗಿನಿಯ ಪೂರ್ವಕ್ಕಿದೆ. ಸುಮಾರು ಒಂದು ಸಾವಿರ ದ್ವೀಪಗಳ ಸಮೂಹವಾಗಿರುವ ಸಾಲೊಮನ್ ದ್ವೀಪಗಳ ಒಟ್ಟು ವಿಸ್ತೀರ್ಣ ೨೮,೪೦೦ ಚ.ಕಿ.ಮೀ. ರಾಷ್ಟ್ರದ ರಾಜಧಾನಿ ಹೊನಿಯಾರ. ಯು.ಕೆ.ಯು ೧೮೯೦ರಲ್ಲಿ ಇಲ್ಲಿ ತನ್ನ ವಸಾಹತನ್ನು ಸ್ಥಾಪಿಸಿತು. ದ್ವಿತೀಯ ಜಾಗತಿಕ ಸಮರದ ಅನೇಕ ಭೀಷಣ ಕದನಗಳು ೧೯೪೨-೪೫ರ ಮಧ್ಯದಲ್ಲಿ ಇಲ್ಲಿ ನಡೆದುವು. ೧೯೭೬ರಲ್ಲಿ ಸ್ವಯಮಾಡಳಿತ ಪಡೆದುಕೊಂಡ ಈ ದೇಶವು ಮುಂದೆ ೧೯೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಈ ರಾಷ್ಟ್ರವು ಕಾಮನ್‌ವೆಲ್ತ್‌ನ ಸದಸ್ಯತ್ವ ಹೊಂದಿದೆ.